ರಾಯಚೂರು ಜ 12:- ಸತತ ಮೂರು ವರ್ಷಗಳ ಕಾಲ ದೇಶದಾದ್ಯಂತ ಸುತ್ತಿ ಶಫರ್ಡ್ ಇಂಡಿಯಾ ಇಂಟರ್ನ್ಯಾಷನಲ್ ಸಂಸ್ಥೆಯ ಸಂಘಟನೆಗೆ ಶ್ರಮಿಸಿರುವುದಾಗಿ ಸಂಸ್ಥೆಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರಾದ ಎಚ್. ವಿಶ್ವನಾಥ್ ಅವರು ಹೇಳಿದರು.
ಅವರಿಂದು ಕೃಷಿ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಶಫರ್ಡ್ ಇಂಡಿಯಾ ಇಂಟರ್ನ್ಯಾಷನಲ್ ಜಿಲ್ಲಾ ಘಟಕ ಆಯೋಜಿಸಿದ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು. ಜಗತ್ತಿನ ವಿವಿಧ ದೇಶಗಳಲ್ಲಿ ಕುರುಬ ಸಮಾಜ ತನ್ನದೇ ಆದ ಇತಿಹಾಸಿಕ ಪರಂಪರೆ ಹೊಂದಿದೆ. ಈ ಇತಿಹಾಸವನ್ನು ಗಮನಿಸಿದ ನನಗೆ ಇಂಟರ್ನ್ಯಾಷನಲ್ ಸಂಸ್ಥೆ ಮಾಡಲೇಬೇಕೆನ್ನುವ ಪ್ರೇರಣೆಯಿಂದ ಈ ಸಂಸ್ಥೆ ಅಸ್ತಿತ್ವಕ್ಕೆ ಬಂದಿತು.
ದೇಶ ಮತ್ತು ರಾಜ್ಯದಲ್ಲಿ ಅಲೆಮಾರಿ ಜನಾಂಗವಾದ ಕುರುಬ ಜನಾಂಗಕ್ಕೆ ರಕ್ಷಣೆ ಅಗತ್ಯವಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತಿರುವ ಸಮಾಜವನ್ನು ಒಂದೇ ವೇದಿಕೆಗೆ ತರುವ ಉದ್ದೇಶ ಈ ಸಂಸ್ಥೆಯ ಉದ್ದೇಶವಾಗಿದೆ. ಕುರಿ ಸಾಗಾಣಿಕೆ ಕೇವಲ ಒಂದು ಪಶುಸಂಗೋಪನೆ ಮಾತ್ರವಾಗಿರದೆ ಅದೊಂದು ಉದ್ಯಮವಾಗಿದೆ. ಸಮಾಜದ ಯಾವುದೇ ಶಾಸಕರಿಗೆ ಕುರಿ, ಕಂಬಳಿ ಮತ್ತು ಸಮಾಜದ ಅಭಿವೃದ್ಧಿಯ ಬಗ್ಗೆ ಕಾಳಜಿ ಇಲ್ಲ ಎಂದು ಟೀಕಿಸಿದವರು.
ಕುರುಬ ಸಮಾಜದ ಒಗ್ಗಟ್ಟಿನಿಂದಾಗಿ ಇಂದು ಕಾಂಗ್ರೆಸ್ ಉಳಿದುಕೊಂಡಿದೆ. ಇಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಲು ಈ ಕುರುಬ ಸಮಾಜ ಕಾರಣವಾಗಿದೆ. ಈ ಸಮುದಾಯದ ಸಮಗ್ರ ಅಭಿವೃದ್ಧಿ ಹೆಚ್ಚಿನ ಆದ್ಯತೆ ದೊರೆಯಬೇಕು ಎಂದರು.
ಈ ಹಿಂದೆ ನಾನು ರಾಜ್ಯ ಶಿಕ್ಷಣ ಸಚಿವರಾಗಿದ್ದ ಅವಧಿಯಲ್ಲಿ ಜಿಲ್ಲೆಯಲ್ಲಿ 500 ಶಾಲೆ ನಿರ್ಮಿಸಿ,12 ಸಾವಿರ ಶಿಕ್ಷಕರನ್ನು ಇಲ್ಲಿಗೆ ವರ್ಗಾಹಿಸಲಾಯಿತು. ಬಿಹಾರಕ್ಕಿಂತ ಸಾಕ್ಷರತೆಯಲ್ಲಿ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕು ಹಿಂದುಳಿದ ಪ್ರದೇಶವಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ ಹಸಿವು ನೀಗಿಸಲು ಬಿಸಿ ಊಟ ಯೋಜನೆ ಜಾರಿ ಮಾಡಲಾಯಿತು ಎಂದು ಸ್ಮರಿಸಿದರು.
ಶಫರ್ಡ್ ಇಂಡಿಯಾ ಇಂಟರ್ನ್ಯಾಷನಲ್ ಸಂಸ್ಥೆಯ ಬೆಂಗಳೂರು ಅಧ್ಯಕ್ಷರಾದ ಸಿ.ಎಂ. ನಾಗರಾಜ್ ಮಾತನಾಡುತ್ತ. ಶಫರ್ಡ್ ಇಂಡಿಯಾ ಇಂಟರ್ನ್ಯಾಷನಲ್ ಸಂಸ್ಥೆಯಲ್ಲಿ ಎಲ್ಲಾ ಪಕ್ಷದ ನಾಯಕರನ್ನು ಸಮಾನವಾಗಿ ಕಾಣುವ ಮೂಲಕ ಸಮಾಜವನ್ನು ಮತ್ತಷ್ಟು ಪ್ರಬಲ ಶಕ್ತಿಯನ್ನಾಗಿ ಬೆಳೆಸುವ ಅಗತ್ಯವಿದೆ ಎಂದು ಹೇಳಿದರು.
ಸಮಾಜ ರಾಜಕೀಯ, ಆರ್ಥಿಕ, ಶೈಕ್ಷಣಿವಾಗಿ ಪ್ರಬಲ ಶಕ್ತಿಯನ್ನಾಗಿ ಮಾಡುವ ಅಗತ್ಯವಿದೆ. ದೇಶದಲ್ಲಿ ಶಫರ್ಡ್ ಸಮುದಾಯ ಎಲ್ಲೆಡೆ ವಿಸ್ತರಿಸಿಕೊಂಡಿದೆ. ಈ ಎಲ್ಲರನ್ನು ಒಗ್ಗಟ್ಟಾಗಿ ಸಂಘಟಿಸುವ ಜವಾಬ್ದಾರಿ ನಮ್ಮ ಮೇಲಿದ್ದು, ಇದಕ್ಕೆ ಶಫರ್ಡ್ಸ್ ಇಂಡಿಯಾ ವೇದಿಕೆಯು ಪೂರಕವಾಗಿದೆ.
ಕರ್ನಾಟಕ ಪ್ರದೇಶ ಕುರುಬರ ಸಮಾಜದ ರಾಜ್ಯ ಅಧ್ಯಕ್ಷರಾದ ಎಂ.ಈರಣ್ಣ ಅವರು ಮಾತನಾಡಿ ಕುರುಬ ಸಮಾಜಕ್ಕೆ ರಾಜಕೀಯ ಬಲ ನೀಡಬೇಕು ಎಂದರು.