Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Politics NewsState News

ಜಾತಿ ವ್ಯವಸ್ಥೆಯಿಂದಲೇ ಜಾತಿಯತೆ,ಮನುಷ್ಯ ತಾರತಮ್ಯ-ವಿದ್ಯಾವಂತರೇ ಹಣೆಬರಹ ನೆಚ್ಚಿಕೊಂಡಿದ್ದಾರೆ-ಸಿದ್ದರಾಮಯ್ಯ

ಜಾತಿ ವ್ಯವಸ್ಥೆಯಿಂದಲೇ ಜಾತಿಯತೆ,ಮನುಷ್ಯ ತಾರತಮ್ಯ-ವಿದ್ಯಾವಂತರೇ ಹಣೆಬರಹ ನೆಚ್ಚಿಕೊಂಡಿದ್ದಾರೆ-ಸಿದ್ದರಾಮಯ್ಯ

ಬೆಂಗಳೂರು ನ 26: ಜಾತಿ ವ್ಯವಸ್ಥೆಯಿಂದಲೇ ಅಸಮಾನತೆ-ಮನುಷ್ಯ ತಾರತಮ್ಯ ಸೃಷ್ಟಿಯಾಗಿದೆ. ಸಂವಿಧಾನ ವಿರೋಧಿಗಳು ಮತ್ತು ಮನುಸ್ಮೃತಿ ಬಗ್ಗೆ ಎಚ್ಚರವಹಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿ, ನಾನು ಮುಖ್ಯಮಂತ್ರಿ ಆಗಿದ್ದೇ ಈ ಸಂವಿಧಾನ ಬಲದಿಂದ ಎಂದರು.

ಸಮಾಜ ಕಲ್ಯಾಣ ಇಲಾಖೆ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ 75 ನೇ ವರ್ಷದ ಸಂವಿಧಾನ ಅಂಗೀಕರಣ ದಿನೋತ್ಸವವನ್ನು ಉದ್ಘಾಟಿಸಿ, ಪ್ರಜಾಪ್ರಭುತ್ವ ದಿನದ ಯಶಸ್ಸಿಗೆ ಶ್ರಮಿಸಿದ ಜಿಲ್ಲಾಧಿಕಾರಿಗಳು ಮತ್ತು ನಾಗರಿಕ ಸಂಘಟನೆಗಳ ಮುಖಂಡರಿಗೆ ಪ್ರಶಸ್ತಿ ಪತ್ರವನ್ನು ವಿತರಿಸಿ ಮಾತನಾಡಿದರು.

ವಿಶ್ವದಲ್ಲಿ ಅತೀ ದೀರ್ಘಕಾಲ ಜಾರಿಯಲ್ಲಿರುವ ಸಂವಿಧಾನ ನಮ್ಮದಾಗಿದೆ. ಸಂವಿಧಾನ ಜಾರಿ ಸಭೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಎಚ್ಚರಿಕೆಯನ್ನು ನಾವ್ಯಾರೂ ಮರೆಯಬಾರದು.

ಎಷ್ಟೇ ಒಳ್ಳೆ ಸಂವಿಧಾನ ನಮ್ಮದಾಗಿದ್ದರೂ ಅದು ಕೆಟ್ಟವರ ಕೈಗೆ ಹೋದರೆ ಪರಿಣಾಮವೂ ಕೆಟ್ಟದಾಗಿರುತ್ತದೆ ಎನ್ನುವ ಎಚ್ಚರಿಕೆ ನೀಡಿದ್ದಾರೆ. ಸಂವಿಧಾನದ ಮೌಲ್ಯಗಳನ್ನು ಪಾಲಿಸುವವರ ಕೈಯಲ್ಲಿ ಈ ಸಂವಿಧಾನ ಇದ್ದಾಗ ಮಾತ್ರ ಸಾರ್ಥಕತೆ ಬರುತ್ತದೆ ಎಂದು ಬಾಬಾ ಸಾಹೇಬರು ಹೇಳಿದ್ದರು‌. ಆದ್ದರಿಂದ ಈ ಸಂವಿಧಾನದ ಮೌಲ್ಯಗಳನ್ನು ವಿರೋಧಿಸುವವರ ಕೈಗೆ ಅಧಿಕಾರ ಹೋಗದಂತೆ ಎಚ್ಚರಿಕೆ ವಹಿಸಬೇಕು ಎಂದು ಕರೆ ನೀಡಿದರು.

ಆರ್ಥಿಕ ಅಸಮಾನತೆ, ಸಾಮಾಜಿಕ ಅಸಮಾನತೆ ಇರುವ ಸಮಾಜಕ್ಕೆ ನಾವು ಕಾಲಿಡುತ್ತಿದ್ದೇವೆ. ಆದ್ದರಿಂದ ರಾಜಕೀಯ ಸ್ವಾತಂತ್ರ್ಯದ ಜೊತೆಗೆ ಆರ್ಥಿಕ ಸ್ವಾತಂತ್ರ್ಯವನ್ನೂ ಒದಗಿಸಿಕೊಳ್ಳಬೇಕಿದೆ. ಸಂವಿಧಾನವನ್ನು ಅರ್ಥ ಮಾಡಿಕೊಳ್ಳುವುದು, ಪಾಲಿಸುವುದು ಎಂದರೆ ಸಾಮಾಜಿಕ ನ್ಯಾಯ, ಸಮಾನತೆ, ಬ್ರಾತೃತ್ವವನ್ನು ಪಾಲಿಸಬೇಕು ಎಂದರು.

ನಮ್ಮ ದೇಶದಲ್ಲಿ ಸಂವಿಧಾನ ವಿರೋಧಿಗಳೂ ಇದ್ದಾರೆ. ಈ ಎಚ್ಚರಿಕೆ ನಮಗೆ ಇರಬೇಕು. ಸಂವಿಧಾನ ಜಾರಿಗೆ ಹಿಂದೂ ಮಹಾ ಸಭಾದ ಸಾವರ್ಕರ್, ಗೋಳ್ವಾಳ್ಕರ್ ಕೂಡ ವಿರೋಧಿಸಿದ್ದರು. ಬಿಜೆಪಿಯ ಮಾತೃಪಕ್ಷ RSS ಕೂಡ ನಮ್ಮ ಸಂವಿಧಾನ ಜಾರಿಯನ್ನು ವಿರೋಧಿಸಿದ್ದರು.

ಬಾಬಾ ಸಾಹೇಬರ ಸಂವಿಧಾನ ಜಾರಿಗೂ ಮೊದಲು ಮನುಷ್ಯ-ಮನುಷ್ಯರನ್ನು ತಾರತಮ್ಯದಿಂದ ಶೋಷಿಸುವ, ಅಸಮಾನತೆಯನ್ನು ಆಚರಿಸುವ ಅನಾಗರಿಕ ವ್ಯವಸ್ಥೆ ಮತ್ತು ಶೂದ್ರರು-ದಲಿತರು-ಮಹಿಳೆಯರಿಗೆ ಶಿಕ್ಷಣವನ್ನು ವಿರೋಧಿಸುವ ಅಲಿಖಿತವಾದ ಮನುಸ್ಮೃತಿಯ ಪದ್ಧತಿಗಳು ಭಾರತದಲ್ಲಿ ಜಾರಿಯಲ್ಲಿತ್ತು. ಸಂವಿಧಾನ ವಿರೋಧಿಗಳು ಮತ್ತೆ ಮನುಸ್ಮೃತಿ ಜಾರಿಗೆ ಹುನ್ನಾರ ನಡೆಸುತ್ತಿದ್ದಾರೆ ಎಂದು ಎಚ್ಚರಿಸಿದರು.

ಈ ಚರಿತ್ರೆಯನ್ನು, ಇತಿಹಾಸವನ್ನು ನಾವು ಮರೆಯಬಾರದು. ನಮಗೆ ಬಂದಿರುವ ಸ್ವಾತಂತ್ರ್ಯ ಸಫಲ ಆಗಬೇಕಾದರೆ ಎಲ್ಲರಿಗೂ ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯ ಸಿಕ್ಕಾಗ ಮಾತ್ರ ಸಾಧ್ಯ ಎಂದು ಅಂಬೇಡ್ಕರ್ ಅವರು ಹೇಳಿದ್ದರು.

ವಿಶ್ವದ ಎಲ್ಲಾ ಸಂವಿಧಾನಗಳನ್ನು ಅಧ್ಯಯನ ಮಾಡಿದ ಬಳಿಕ ಅಂಬೇಡ್ಕರ್ ಅವರು ನಮ್ಮ ಅತ್ಯುನ್ನತವಾದ ಸಂವಿಧಾನವನ್ನು ರಚಿಸಿದ್ದಾರೆ.

ಮೋದಿ ಮಂತ್ರಿ ಮಂಡಲದಲ್ಲಿ ಮಂತ್ರಿ ಆಗಿದ್ದ ಅನಂತ ಕುಮಾರ ಹೆಗ್ಡೆ ಅವರು, “ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಸಾರ್ವಜನಿಕವಾಗಿ ಒಪ್ಪಿಕೊಂಡರು. ಆದರೆ ಮೋದಿಯವರಾಗಲಿ, ಬಿಜೆಪಿಯವರಾಗಲಿ ಇದನ್ನು ವಿರೋಧಿಸಲಿಲ್ಲ. ಅವರನ್ನು ಮಂತ್ರಿ ಸ್ಥಾನದಿಂದ ಇಳಿಸಲಿಲ್ಕ. ಆದ್ದರಿಂದ ಅನಂತ ಕುಮಾರ ಹೆಗ್ಡೆ ಅವರ ಮಾತಿಗೆ ಅವರೆಲ್ಲರ ಸಮ್ಮತಿ ಇತ್ತು ಅಂತಲೇ ಅರ್ಥ. ಇದನ್ನು ದೇಶದ ಜನತೆ ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಸಂವಿಧಾನದ ಧ್ಯೇಯೋದ್ದೇಶಗಳನ್ನು ನಾವು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ಯಾವುದೇ ಸರ್ಕಾರ, ಯಾವುದೇ ಪಕ್ಷ ಅಧಿಕಾರಕ್ಕೆ ಬಂದಾಗ ಸಂವಿಧಾನದ ಪ್ರಕಾರವೇ ನಡೆದುಕೊಳ್ಳಬೇಕು.

ನಮ್ಮ ಸರ್ಕಾರ ಕೂಡ ಸಂವಿಧಾನದ ಆಶಯಗಳನ್ನು ಈಡೇರಿಸುವ ದಿಕ್ಕಿನಲ್ಲಿ ಹತ್ತು ಹಲವು ಭಾಗ್ಯಗಳನ್ನು ಜಾರಿ ಮಾಡಿದೆವು‌. ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ನೀಡುವ ಕಾರ್ಯಕ್ರಮಗಳನ್ನು ನಾವು ರೂಪಿಸಿ, ಜಾರಿ ಮಾಡಿದ್ದೇವೆ ಎಂದರು.

ಬಸವಣ್ಣನವರು 850 ವರ್ಷಗಳ ಹಿಂದೆಯೇ ಜಾತಿ ವ್ಯವಸ್ಥೆ ವಿರುದ್ಧ ಕರೆ ನೀಡಿದ್ದರು. ಆದರೆ ಇವತ್ತಿಗೂ ಜಾತಿ ಹೋಗಿಲ್ಲ. ಆರ್ಥಿಕ, ಸಾಮಾಜಿಕ ಸಮಾನತೆ ಬರದೆ ಜಾತಿ ವ್ಯವಸ್ಥೆ ಹೋಗಲು ಸಾಧ್ಯವಿಲ್ಲ ಎಂದರು.

ಜಾತಿ ವ್ಯವಸ್ಥೆಯಿಂದಲೇ ಅಸಮಾನತೆ-ಮನುಷ್ಯ ತಾರತಮ್ಯ ಸೃಷ್ಟಿಯಾಗಿದೆ. ಆದ್ದರಿಂದ ಜಾತ್ಯಾತೀತರಾಗಿ ಮಕ್ಕಳನ್ನು ಬೆಳೆಸುವುದೇ ಸಂವಿಧಾನಕ್ಕೆ ನಾವು ಸಲ್ಲಿಸುವ ಅತ್ಯುನ್ನತ ಗೌರವ ಎಂದರು.

Megha News