-
ರಾಯಚೂರು, ಮೇ. 9- ಕೇಂದ್ರ ಗೃಹ ಸಚಿವಾಲಯದ ಸೂಚನೆ ಮೇರೆಗೆ ರಾಯಚೂರಿನ ಶಕ್ತಿನಗರದಲ್ಲಿ ಮೇ 9ರಂದು ಶುಕ್ರವಾರ ಸಂಜೆ 4.34 ರಿಂದ 4.39ರವರೆಗೆ ತುರ್ತು ಪರಿಸ್ಥಿತಿ ಎಚ್ಚರಿಕೆಯ ಸೈರನ್ ಮೊಳಗಿಸಲಾಯಿತು.
ಶಕ್ತಿನಗರದ ವಿದ್ಯುತ್ ಶಾಖೋತ್ಪನ್ನ ಕೇಂದ್ರದ ಹೆಲಿಪ್ಯಾಡ್ ಕೇಂದ್ರ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್, ಕೆ.ಪಿ.ಟಿ.ಸಿ.ಎಲ್, ಸಿ.ಐ.ಎಸ್.ಎಫ್ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಗರಿಕ ರಕ್ಷಣಾ ಅಣಕು ಪ್ರದರ್ಶನ ಕಾರ್ಯಕ್ರಮದಲ್ಲಿ ಮೂರು ವಿಧದ ಸೈರನ್‌ಗಳು ಕೇಳಿಸಿದವು. ತುರ್ತು ಪರಿಸ್ಥಿತಿಯಲ್ಲಿ ಮೊದಲ ಸೈರನ್, ಎರಡನೇ ಸೈರನ್, ಮೂರನೇ ಸೈರನ್ ಸಂದರ್ಭದ ಬಗ್ಗೆ ತಿಳಿಸಲಾಯಿತು.
ಈ ವೇಳೆ ಸೈರನ್‌ಗೆ ಹೇಗೆ ಪ್ರತಿಕ್ರಿಯಿಸಬೇಕು, ವಾಯುದಾಳಿ ಆದರೆ ಏನು ಮಾಡಬೇಕು, ಬೆಂಕಿ ಹತ್ತಿಕೊಂಡಾಗ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವುದು ಹೇಗೆ, ಅವಶೇಷಗಳ ಅಡಿ ಸಿಲುಕಿದವರನ್ನು, ಎತ್ತರದ ಪ್ರದೇಶಗಳಲ್ಲಿರುವವರನ್ನು ಹೇಗೆ ರಕ್ಷಿಸಬೇಕು, ವೈದ್ಯಕೀಯ ತುರ್ತು ಸೇವೆಗಳನ್ನು ಒದಗಿಸುವುದು ಹೇಗೆ ಎಂಬುದನ್ನು ಕಲಿಸಲಾಯಿತು.
ಸೈರನ್ ಮೊಳಗಿದ ಕೂಡಲೇ ನಾಗರಿಕರು ಕೈಗೊಳ್ಳಬೇಕಾದ ಎಚ್ಚರಿಕೆ ಹಾಗೂ ದುರ್ಘಟನೆಯಿಂದ ಕಟ್ಟಡಗಳಲ್ಲಿ ಸಿಲುಕಿರುವ ನಾಗರಿಕರನ್ನು ಸುಸಜ್ಜಿತವಾದ ಏರಿಯಲ್ ಲ್ಯಾಡರ್ ವಾಹನದ ಮೂಲಕ ರಕ್ಷಣೆ ಮಾಡುವುದನ್ನು ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಸಿಬ್ಬಂದಿ ಪ್ರದರ್ಶಿಸಿದರು.
ರಾಯಚೂರ ಜಿಲ್ಲೆಯಲ್ಲಿ ಮೊದಲ ಬಾರಿಗೆ ನಡೆದ ಈ ಮಾಕ್ ಡ್ರಿಲ್ ನಲ್ಲಿ ಪರಿಶಿಷ್ಟ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ರಾಯಚೂರು ಗ್ರಾಮಾಂತರ ಕ್ಷೇತ್ರದ ಶಾಸಕರಾದ ಬಸನಗೌಡ ದದ್ದಲ್ ಅವರು, ಜಿಲ್ಲಾಧಿಕಾರಿಗಳಾದ ನಿತೀಶ್ ಕೆ, ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ತುಕಾರಾಂ ಪಾಂಡ್ವೆ,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಪುಟ್ಟಮಾದಯ್ಯ, ಅಪರ ಜಿಲ್ಲಾಧಿಕಾರಿ ಶಿವಾನಂದ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಹರೀಶ್, ರಾಯಚೂರು ಸಹಾಯಕ ಆಯುಕ್ತರಾದ ಗಜಾನನ ಬಾಳೆ,
ತಹಶೀಲ್ದಾರ್ ಸುರೇಶ ವರ್ಮ
ಸೇರಿದಂತೆ ಇತರರು ಭಾಗಿಯಾಗಿ ಅಣುಕು ಪ್ರದರ್ಶನ ವೀಕ್ಷಣೆ ಮಾಡಿದರು.
*ಸೈನಿಕರಂತೆ ಕೆಲಸ ಮಾಡೋಣ* ಈ ವೇಳೆ ಶಾಸಕರಾದ ಬಸನಗೌಡ ದದ್ದಲ್ ಅವರು ಮಾತನಾಡಿ,
ಜಿಲ್ಲೆಯ ಪ್ರತಿಯೊಬ್ಬರು ಸೈನಿಕರಂತೆ ಕೆಲಸ ಮಾಡಬೇಕು. ಜಿಲ್ಲಾಡಳಿದೊಂದಿಗೆ ಕೈಜೋಡಿಸಬೇಕು. ಸಾರ್ವಜನಿಕರು ಯಾವುದೇ ರೀಯಿಯ ಭಯ ಪಡಬಾರದು ಎಂದರು.
*ಜನರ ರಕ್ಷಣೆ ಉದ್ದೇಶ:*
ಕೇಂದ್ರ ಸರ್ಕಾರದ ಆದೇಶದಂತೆ ಹಾಗೂ ರಾಜ್ಯ ಸರ್ಕಾರದ ಸೂಚನೆಯಂತೆ ಜಿಲ್ಲೆಯಲ್ಲಿ ಅಣುಕು ಪ್ರದರ್ಶನ ಹಮ್ಮಿಕೊಳ್ಳಲಾಗಿದ್ದು, ಅಣಕು ಪ್ರದೇಶದ ಮುಖ್ಯ ಉದ್ದೇಶವು ಶತ್ರು ದೇಶಗಳಿಂದ ದಾಳಿಯಾದ ಸಂದರ್ಭದಲ್ಲಿ ಸಾರ್ವಜನಿಕರ ರಕ್ಷಣೆ ಕ್ರಮಕ್ಕೆ ಸಂಬಂಧಿಸಿದ್ದಾಗಿರುತ್ತದೆ ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಹೇಳಿದರು.
ತುರ್ತು ಪರಿಸ್ಥಿತಿ ವೇಳೆ ವಿವಿಧ ಇಲಾಖೆಗಳಿಂದ ಯಾವ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡಬೇಕು. ಸಾರ್ವಜನಿಕರು ಯಾವ ರೀತಿಯಲ್ಲಿ ಇರಬೇಕು ಎಂಬುದನ್ನು ತಿಳಿಸಲು ಬೇರೆ ಬೇರೆ ಇಲಾಖೆಗಳು ಮತ್ತು ಭದ್ರತಾ ಪಡೆಯ
ತಂಡಗಳು ಹೇಗೆ ಕಾರ್ಯನಿರ್ವಹಣೆ ಮಾಡಬೇಕು ಮತ್ತು ಎಂತಹದ್ದೇ ಪರಿಸ್ಥಿತಿ ಎದುರಾದರು ಸಹ ಎಲ್ಲರೂ ಸೇರಿ ಅದನ್ನು ಹೇಗೆ ನಿಭಾಯಿಸಬೇಕು ಎಂಬುದರ ಪೂರ್ವ ತಯಾರಿ ಇದಾಗಿದೆ ಎಂದು ತಿಳಿಸಿದರು.
ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಅಣುಕು ಪ್ರದರ್ಶನ ಮಾಡಬೇಕು. ಸಾರ್ವಜನಿಕರಲ್ಲಿ ಯಾವುದೇ ರೀತಿಯಲ್ಲಿ ಗೊಂದಲ ಹಾಗೂ ಅಂಜಿಕೆ ಇರಬಾರದು. ಜಿಲ್ಲಾಡಳಿತವು ಈಗಾಗಲೇ ಎಲ್ಲಾ ರೀತಿಯ ಸಿದ್ದತೆಯನ್ನು ಮಾಡಿಕೊಂಡಿದೆ. ದೇವಸಗೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 5-6 ಹಳ್ಳಿಗಳಲ್ಲಿ ತರಬೇತಿಯನ್ನು ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ತರಬೇತಿ ನೀಡಲಾಗುವುದು. ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯಿಂದ ಕಂಟ್ರೋಲ್ ರೋಂ ಪ್ರಾರಂಭ ಮಾಡಲಾಗಿದ್ದು, ಸಾರ್ವಜನಿಕರು ಸದುಪಯೋಗ ಪಡೆಯಬೇಕು ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಎನ್.ಸಿ.ಸಿ, ವಿದ್ಯಾರ್ಥಿಗಳು ಇದ್ದರು.
Megha News > Local News > ಶಕ್ತಿನಗರದಲ್ಲಿ ಮಾಕ ಡ್ರೀಲ್:ಮೊಳಗಿದ ಸೈರನ್
ಶಕ್ತಿನಗರದಲ್ಲಿ ಮಾಕ ಡ್ರೀಲ್:ಮೊಳಗಿದ ಸೈರನ್
Tayappa - Raichur09/05/2025
posted on

Leave a reply