ರಾಯಚೂರು. ಕೇಂದ್ರ ಸರ್ಕಾರವು ಸ್ವಾವಲಂಬಿ ಬದುಕು ನಡೆಸಲು ಅನುಕೂಲ ಆಗುವ ಹಿನ್ನೆಲೆಯಲ್ಲಿ ಪಿಎಂ ವಿಶ್ವಕರ್ಮ ಯೋಜನೆಯನ್ನು ಜಾರಿಗೆ ತಂದಿದ್ದು, ಯೋಜನೆಯ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಸಿಡಾಕ್ ಜಂಟಿ ನಿರ್ದೇಶಕ ಜಿ.ಯು.ಹುಡೇದ್ ಅವರು ಹೇಳಿದರು.
ನಗರದ ಆಶಾಪುರ ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪಿಎಂ ವಿಶ್ವಕರ್ಮ ಯೋಜನೆಯ 3ನೇ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ಗ್ರಾಮೀಣ ಭಾಗದಲ್ಲಿರುವ ಕುಶಲಕರ್ಮಿಗಳನ್ನು ಆರ್ಥಿಕವಾಗಿ ಸ್ವಾಲಂಬಿಗಳಾಗಿಸುವ ಉದ್ದೇಶದಿಂದ ಪಿಎಂ ವಿಶ್ವಕರ್ಮ ಯೋಜನೆ ನಿರ್ಮಾಣವಾಗಿದೆ. ಈ ಯೋಜನೆ ವ್ಯಾಪ್ತಿಗೆ ಒಳಪಡುವಂತೆ ತರಬೇತಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಈ ಬಗ್ಗೆ ಮಾಹಿತಿ ಪಡೆದುಕೊಂಡು ಸದ್ಬಳಕೆ ಮಾಡಿಕೊಳ್ಳಬಹುದು. ಇದಲ್ಲದೆ ಈ ಯೋಜನೆಯಡಿ ಬ್ಯಾಂಕುಗಳ ಮುಖಾಂತರ ಸಾಲ ಸೌಲಭ್ಯ ಕೂಡ ಲಭ್ಯವಿದ್ದು, ಅರ್ಹ ಫಲಾನುಭವಿಗಳು ಸರಿಯಾದ ಮಾಹಿತಿ ಪಡೆದುಕೊಂಡು ಯೋಜನೆಯ ಸೌಲಭ್ಯ ಪಡೆಯಬೇಕು ಎಂದು ಹೇಳಿದರು.
ಈ ವೇಳೆ ಜಿಲ್ಲಾ ಕೈಗಾರಿಕಾ ತರಬೇತಿಯ ಜಂಟಿ ನಿರ್ದೇಶಕರಾದ ಬಸವರಾಜ ಯಂಕಚಿ ಅವರು ಮಾತನಾಡಿ, ಗ್ರಾಮೀಣ ಮತ್ತು ನಗರ ಪ್ರದೇಶದ ಕುಶಲಕರ್ಮಿಗಳ ಜನರಿಗೆ ಬೇಕಾಗುವ ಸಲಕರಣೆಗಳನ್ನು ಒದಗಿಸುವ ಯೋಜನೆ ಇದಾಗಿದ್ದು, ಈ ಯೋಜನೆಯಡಿ ಸಾಲವನ್ನು ಪಡೆದ ಫಲಾನುಭವಿಗಳು ನಿಗದಿತ ಅವಧಿಯಲ್ಲಿ ಸಾಲವನ್ನು ಮರುಪಾವತಿಸಿ, ದೇಶದ ಪ್ರಗತಿಗೆ ಸಹಕರಿಸಬೇಕೆಂದು ಹೇಳಿದರು.
ವಿಶ್ವಕರ್ಮ ಎಂದರೆ ಕೇವಲ ಒಂದು ಸಮುದಾಯಕ್ಕೆ ಸೀಮಿತವಲ್ಲ. ಇದು ಕೌಶಲ್ಯ ಹೊಂದಿದ ಅಭ್ಯರ್ಥಿಗಳನ್ನು ಗುರುತಿಸುವ ಕಾರ್ಯಕ್ರಮವಾಗಿದೆ. ಫಲಾನುಭವಿಗಳು ಈ ಯೋಜನೆಯಡಿ ಪ್ರಮಾಣ ಪತ್ರ ಪಡೆದಿದ್ದಲ್ಲಿ ತಮ್ಮ ಮುಂದಿನ ಜೀವನ ಉಜ್ವಲವಾಗುತ್ತದೆ. ತರಬೇತಿ ವೇಳೆಯಲ್ಲಿ ಉತ್ತಮ ರೀತಿಯಲ್ಲಿ ತರಬೇತಿಯನ್ನು ಪಡೆದು ತಮ್ಮ ಮುಂದಿನ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಪಿಎಂ ವಿಶ್ವಕರ್ಮ ಜಿಲ್ಲಾ ನೋಡಲ್ ಅಧಿಕಾರಿ ಆನಂದ ಕುಮಾರ್, ಎಸ್.ಬಿ.ಐನ ಎಲ್.ಬಿ.ಒ ಸಿಬ್ರಾರಾಮ್ ಮಿಶ್ರಾ, ಎಸ್ಬಿಐ ಮುಖ್ಯ ಅಸೋಸಿಯೇಟ್ ಸೋಮಶೇಖರ್, ಐಸಿಐಸಿಐ ಬ್ಯಾಂಕ್ ಮ್ಯಾನೇಜರ್ ಶರಣಬಸವ ಪಾಟೀಲ್, ಇಂಡಿಯನ್ ಓವರ್ಸೀಸ್ ಬ್ಯಾಂಕ್ ಬ್ರಾಂಚ್ ಮ್ಯಾನೇಜರ್ ರಂಜಿತ್ ಕುಮಾರ್, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕರಾದ ವಿಜಯ ಕುಮಾರ್ ಬಡಿಗೇರ್, ರವಿಶೇಖರ, ಗೀತಾ, ತರಬೇತಿದರರಾದ ಗೀತಾ, ಜ್ಯೋತಿ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯ ಸಿಬ್ಬಂದಿಯಾದ ಶೈಲಜಾ ಸೇರಿದಂತೆ ವಿವಿಧ ಗ್ರಾಮದ ಮಹಿಳೆಯರು ಕಾರ್ಯಕ್ರಮದಲ್ಲಿ ಇದ್ದರು.