Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ಸಂಸತ್ ಭವನದ ಮೇಲೆ ನಡೆದಿರುವ ದಾಳಿ ಖಂಡನೀಯ ಮತ್ತು ಆಘಾತಕಾರಿ: ಸಿಎಂ ಸಿದ್ದರಾಮಯ್ಯ

ಸಂಸತ್ ಭವನದ ಮೇಲೆ ನಡೆದಿರುವ ದಾಳಿ ಖಂಡನೀಯ ಮತ್ತು ಆಘಾತಕಾರಿ: ಸಿಎಂ ಸಿದ್ದರಾಮಯ್ಯ

ಬೆಳಗಾವಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಸಂಸತ್ ಭವನದ ಮೇಲೆ ಇಂದು ನಡೆದಿರುವ ದಾಳಿ ಖಂಡನೀಯ, ಮಾತ್ರವಲ್ಲ ಅತ್ಯಂತ ಆಘಾತಕಾರಿಯಾದುದು ಎಂದು ಸಿಎಂ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.
ಭದ್ರತಾ ವ್ಯವಸ್ಥೆಯ ಲೋಪ: ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಸಂಸದರೆಲ್ಲರೂ ಸುರಕ್ಷಿತವಾಗಿದ್ದಾರೆ ಎನ್ನುವುದು ಸಮಾಧಾನದ ಸಂಗತಿ. ಅತ್ಯಂತ ಬಿಗಿ ಭದ್ರತೆ ಹೊರತಾಗಿಯೂ ಇಂತಹದ್ದೊಂದು ಘಟನೆ ನಡೆದಿರುವುದು ಆಘಾತಕಾರಿ ಬೆಳವಣಿಗೆ. ಇದು ಸಂಪೂರ್ಣವಾಗಿ ಭದ್ರತಾ ವ್ಯವಸ್ಥೆಯ ಲೋಪ ಎನ್ನುವುದು ಸ್ಪಷ್ಟವಾಗಿದೆ. ಈ ಬಗ್ಗೆ ನಿಷ್ಪಕ್ಷ ಪಾತ ತನಿಖೆ ನಡೆಸಿ ಘಟನೆಯ ಹಿಂದಿನ ಸಂಪೂರ್ಣ ಸತ್ಯವನ್ನು ದೇಶದ ಮುಂದಿಡುವುದು ಕೇಂದ್ರ ಸರ್ಕಾರ ಹಾಗೂ ಅದರಲ್ಲೂ ಪ್ರಮುಖವಾಗಿ ದೇಶದ ಗೃಹ ಸಚಿವರ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ.ಇಪ್ಪತ್ತೆರಡು ವರ್ಷಗಳ ಹಿಂದೆ (13-12-2001) ಸಂಸತ್ ಮೇಲೆ ಭಯೋತ್ಪಾದಕರು ನಡೆಸಿದ್ದ ದಾಳಿಯ ದಿನವನ್ನೇ ಗುರಿಯಾಗಿರಿಸಿಕೊಂಡು ಈ ದಾಳಿ ನಡೆದಿರುವುದನ್ನು ಗಮನಿಸಿದರೆ ಇದರ ಹಿಂದೆ ಬೇರೆ ಹುನ್ನಾರಗಳಿರಬಹುದೆಂಬ ಸಂಶಯ ಮೂಡುತ್ತಿದೆ. 2001ರ ದಾಳಿಯ ಸಮಯದಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರವೇ ಇತ್ತು ಎನ್ನುವುದನ್ನು ಗಮನಿಸಬೇಕಾಗುತ್ತದೆ. ಇದು ದೇಶದ ಸುರಕ್ಷತೆಯ ಬಗ್ಗೆ ಹಲವಾರು ಪ್ರಶ್ನೆಗಳಿಗೆ ಕಾರಣವಾಗಿದೆ ಎಂದು ಟೀಕಿಸಿದ್ದಾರೆ.
ಸಂಸದರನ್ನು ವಿಚಾರಣೆಗೆ ಒಳಪಡಿಸಲಿ: ’’ಸಂಸತ್ ಭವನದ ಮೇಲೆ ದಾಳಿ ನಡೆಸಿದ ಯುವಕರಿಗೆ ಮೈಸೂರಿನ ಲೋಕಸಭಾ ಸದಸ್ಯ ಪ್ರತಾಪ ಸಿಂಹ ಅವರು ಪಾಸ್ ನೀಡಿರುವ ವರದಿಗಳು ಬರುತ್ತಿವೆ. ಈ ಸುದ್ದಿ ನಿಜವಾಗಿದ್ದಲ್ಲಿ ಈ ಸಂಸದರನ್ನು ಕೂಡಾ ವಿಚಾರಣೆಗೆ ಒಳಪಡಿಸಬೇಕಾಗುತ್ತದೆ. ಪಾಸ್ ನೀಡಿರಬೇಕಾಗಿರುವ ಯುವಕರು ಸಂಸದರ ಪರಿಚಯಸ್ಥರಾಗಿರಬಹುದು. ಪರಿಚಯಸ್ಥರಲ್ಲದೇ ಇದ್ದರೆ ಅಪರಿಚಿತರಿಗೆ ಪಾಸುಗಳನ್ನು ಹೇಗೆ ನೀಡಲಾಯಿತು ಎನ್ನುವ ಪ್ರಶ್ನೆ ಕೂಡಾ ಹುಟ್ಟುತ್ತದೆ. ಕಾನೂನಿನಲ್ಲಿ ಬೇಜವಾಬ್ದಾರಿಯಿಂದ ನಡೆಯುವ ಅನಾಹುತ ಕೂಡಾ ಶಿಕ್ಷಾರ್ಹ ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ‘‘ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.ದೇಶದ ಹೃದಯದಂತಿರುವ ಸಂಸತ್ ಭವನಕ್ಕೆ ಬೇರೆ ಯಾವುದೇ ಪ್ರದೇಶ ಇಲ್ಲವೆ ಕಟ್ಟಡವನ್ನು ಮೀರಿದ ಬಿಗಿಭದ್ರತೆಯನ್ನು ನೀಡಲಾಗಿದೆ. ಹೀಗಿದ್ದರೂ ಈ ಯುವಕರು ಸ್ಮೋಕ್ ಬಾಂಬು ಹಿಡಿದುಕೊಂಡು ಸಂಸತ್ ಒಳಗೆ ಹೇಗೆ ಪ್ರವೇಶಿಸಿದರು? ಈ ಕೃತ್ಯದಲ್ಲಿ ಒಳಗಿನವರು ಯಾರಾದರೂ ಭಾಗಿಯಾಗಿದ್ದಾರೆಯೇ? ಈ ಯುವಕರ ಕೃತ್ಯದ ಹಿಂದೆ ಬೇರೆ ಯಾವುದಾದರೂ ಬಾಹ್ಯ ಶಕ್ತಿಗಳ ಕೈವಾಡ ಇದೆಯೇ? ಎಂಬಿತ್ಯಾದಿ ಪ್ರಶ್ನೆಗಳು ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ.
ದೇಶದ ಸಂಸತ್ ಭವನವೇ ಸುರಕ್ಷಿತವಾಗಿಲ್ಲದಿರುವಾಗ ದೇಶದ ಗಡಿ ಸುರಕ್ಷಿತವಾಗಿರುತ್ತಾ ಎಂಬಿತ್ಯಾದಿ ಪ್ರಶ್ನೆಗಳು ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ. ಈ ಪ್ರಶ್ನೆಗಳಿಗೆಲ್ಲ ಉತ್ತರಿಸಬೇಕಾಗಿರುವ ಹೊಣೆ ದೇಶದ ಪ್ರಧಾನಿ ನರೇಂದ್ರ ಮೋದಿಯವ ಅವರದ್ದಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Megha News