ಸಿಂಧನೂರು:ಜಾತಿಗಣತಿ ವಿಚಾರದಲ್ಲಿ ಪಕ್ಷದ ನಿರ್ಧಾರಕ್ಕೆ ನಾವೆಲ್ಲ ಬದ್ಧರಾಗಿರುತ್ತೇವೆ ಎಂದು ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.
ಸಿಂಧನೂರು ನಗರದಲ್ಲಿ ದಸರಾ ಉತ್ಸವ ಸಮಿತಿ ಆಯೋಜಿಸಿದ್ದ ರೈತ ದಸರಾ ಉದ್ಘಾಟನೆಗೆ ಆಗಮಿಸಿದ ಅವರು ಸರ್ಕ್ಯೂಟ್ ಹೌಸ್ ಹತ್ತಿರದ ಹೆಲಿಪ್ಯಾಡ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದರು. ಜಾತಿ ಗಣತಿ ವಿಚಾರದಲ್ಲಿ ನಮ್ಮ ಪಕ್ಷ ಏನ್ ಹೇಳುತ್ತೆ ಅದನ್ನೆ ನಾವೆಲ್ಲ ಮಾಡುತ್ತೇವೆ ಎಂದು ಪ್ರತಿಕ್ರಿಯಿಸಿದರು.
ಹರಿಯಾಣ ಹಾಗೂ ಜಮ್ಮುಕಾಶ್ಮೀರದ ಎರಡು ರಾಜ್ಯಗಳ ಚುನಾವಣಾ ಫಲಿತಾಂಶ ಇನ್ನೂ ಬಂದಿಲ್ಲ. ಅಲ್ಲಿನ ಫಲಿತಾಂಶ ಬಹಳ ಏರುಪೇರು ಆಗುತ್ತಿದೆ. ಬೆಳಗ್ಗೆ ಹರಿಯಾಣದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು. ಈ ಹಿಂದಿದೆ ಎಂದು ಕೇಳಿದ್ದೇನೆ. ನಾನು ಈಗತಾನೇ ಹೆಲಿಕ್ಯಾಪ್ಟರ್ ನಿಂದ ಇಳಿದಿದ್ದೇನೆ. ಪೂರ್ಣ ತಿಳಿದುಕೊಂಡು ಮಾತನಾಡುತ್ತೇನೆ ಎಂದು ಹೇಳಿದರು.
ಘೇರಾವ್ ಹಾಕಲು ಯತ್ನ:
ಒಳಮೀಸಲಾತಿ ಜಾರಿಗಾಗಿ ಆಗ್ರಹಿಸಿ ಐಕ್ಯ ಹೋರಾಟ ಸಮಿತಿಯ ಮುಖಂಡರು ಸಿಂಧನೂರಿನ ಹೆಲಿಪ್ಯಾಡ್ ಬಳಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರನ್ನು ಘೇರಾವ್ ಹಾಕಲು ಯತ್ನಿಸಿ, ಒಳಮೀಸಲಾತಿ ಜಾರಿ ಮಾಡಬೇಕೆಂದು ಘೋಷಣೆ ಕೂಗಿದರು. ನಂತರ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ನೂಕುನುಗ್ಗಲು ಸಹ ಉಂಟಾಯಿತು.
ಈ ಸಂದರ್ಭದಲ್ಲಿ ಕೃಷಿ ಸಚಿವ ಚೆಲುವರಾಯ ಸ್ವಾಮಿ, ಸಚಿವ ಶಿವರಾಜ್ ತಂಗಡಗಿ, ಶಾಸಕರಾದ ಹಂಪನಗೌಡ ಬಾದರ್ಲಿ, ಆರ್.ಬಸನಗೌಡ ತುರವಿಹಾಳ, ರಾಘವೇಂದ್ರ ಹಿಟ್ನಾಳ್, ವಿಧಾನ ಪರಿಷತ್ ಶಾಸಕ ಬಸನಗೌಡ ಬಾದರ್ಲಿ ಸೇರಿದಂತೆ ಅನೇಕರು ಇದ್ದರು.