ಬೆಂಗಳೂರು.ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸುವ ಸಂಬಂಧ ಕೌಶಲ್ಯಾಭಿವೃದ್ಧಿ ಹಾಗೂ ಜೀವ ನೋಪಾಯ, ವೈದ್ಯಕೀಯ ಶಿಕ್ಷಣ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರ ಸಮಿತಿಯನ್ನು ರಚಿಸಿದೆ.
ಕಳೆದ ಜ.12ರಂದು ರಾಜ್ಯ ಸರ್ಕಾರದ ಮಹತ್ವಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಕಾರ್ಯಕ್ರಮವನ್ನು ಶಿವಮೊಗ್ಗದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಲಾಗಿತ್ತು. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಸಚಿವ ಶರಣಪ್ರಕಾಶ್ ಪಾಟೀಲ್ ಅವರಿಗೆ ವಿಶೇಷ ಆಸಕ್ತಿ ವಹಿಸಿ ಉದ್ಯೋಗ ಮೇಳ ಸಮಿತಿಯನ್ನು ಅವರ ಅಧ್ಯಕ್ಷತೆಯಲ್ಲೇ ರಚಿಸಿದ್ದಾರೆ.
ಈ ಸಮಿತಿಯು ರಾಜ್ಯ, ಪ್ರಾದೇಶಿಕ ಹಾಗೂ ಜಿಲ್ಲಾ ಮಟ್ಟದಲ್ಲಿ ಬೃಹತ್, ಸಣ್ಣ ಕೈಗಾರಿಕೆ, ಸಾಫ್ಟ್ವೇರ್ ಉದ್ಯಮಿಗಳ ಸಹಯೋಗದೊಂದಿಗೆ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಿದೆ. ಬೇಡಿಕೆಗೆ ಅನುಗುಣವಾಗಿ ಯುವ ಜನತೆಗೆ ಉದ್ಯೋಗಗಳನ್ನು ನೀಡಿ ಸ್ವಾವಲಂಬಿ ಯನ್ನಾಗಿ ಮಾಡುವ ಸದುದ್ದೇಶದಿಂದ ರಾಜ್ಯ ಸರ್ಕಾರ ಉದ್ಯೋಗ ಮೇಳವನ್ನು ಆಯೋ ಜಿಸಲು ಮುಂದಾಗಿದೆ.
ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಬೃಹತ್ ಉದ್ಯೋಗ ಮೇಳ ನಡೆಸುವ ಗುರಿ ಹೊಂದಲಾಗಿದೆ. ಕನ್ನಡಿಗರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಸರ್ಕಾರದಿಂದಲೇ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಸರ್ಕಾರಿ, ಖಾಸಗಿ ಕ್ಷೇತ್ರಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮತ್ತು ಉದ್ಯೋಗ ಸೃಷ್ಟಿಯ ಬಗ್ಗೆ ಈಗಾಗಲೇ ಸಚಿವ ಶರಣಪ್ರಕಾಶ್ ಪಾಟೀಲ್ ಅವರು ಇಲಾಖೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟವರ ಜೊತೆ ಚರ್ಚೆ ನಡೆಸಿದ್ದಾರೆ.
ಉದ್ಯೋಗ ಮೇಳ ನಡೆಸುವುದರಿಂದ ಐಟಿ- ಬಿಟಿ, ಹೋಟೆಲ್, ಉತ್ಪಾದನಾ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಗ್ರಾಮೀಣ ಭಾಗದ ಯುವಕ- ಯುವತಿಯರಿಗೆ ಹೆಚ್ಚಿನ ಅವಕಾಶ ಸಿಗಲಿದೆ.