ರಾಯಚೂರು. ನಗರದ ಮಾವಿನಕೆರೆ ದಡದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ೧೧ ಮಳಿಗೆಗಳನ್ನು ನಗರಸಭೆ ಅಧಿಕಾರಿಗಳು ಇಂದು ತೆರವು ಕಾರ್ಯಾಚರಣೆ ನಡೆಸಿ ಅರ್ಧಕ್ಕೆ ಕಾರ್ಯಚರಣೆ ನಿಲ್ಲಿಸಿ ಮರಳಿದ ಘಟನೆ ಜರುಗಿದೆ.
ನಗರದ ವಾರ್ಡ ೧೨ ರಲ್ಲಿ ಕೆಲ ದಿನಗಳ ಹಿಂದೆ ಅನಧಿಕೃತವಾಗಿ ಮಳಿಗೆಗಳನ್ನು ನಿರ್ಮಿಸಿರುವದನ್ನು ತೆರವುಗೊಳಿಸುವಂತೆ ಸಾರ್ವಜನಿಕರಿಂದ ಒತ್ತಾಯ ಕೇಳಿಬಂದಿತ್ತು. ನಗರಸಭೆ ಸಿಬ್ಬಂದಿಗಳು ಇಂದು ಪೊಲೀಸರ ನೆರವಿನೊಂದಿಗೆ ಜೆಸಿಬಿ ಸಹಾಯದಿಂದ ಮಳಿಗೆಗಳನ್ನು ಧ್ವಂಸಗೊಳಿಸದರು. ಕೆಲ ಘಂಟೆಯಲ್ಲಿ ಕಾರ್ಯಾಚರಣೆ ನಿಲ್ಲಿಸಲಾಯಿತು. ವಾರ್ಡಿನ ನಗರ ಸಭೆ ಸದಸ್ಯ ಎಂ.ಪವನಕುಮಾರ ಸ್ಥಳಕ್ಕೆ ಆಗಮಿಸಿ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಮಳಿಗೆಗಳು ಸಂಬಂಧಿಸಿದವರೆ ತೆರವುಗೊಳಿಸಿಕೊಳ್ಳುತ್ತಾರೆ. ಸಮರ್ಪಕ ಮಾಹಿತಿ ಸಂಗ್ರಹಿಸಿತೆರವುಗೊಳಿಸುವಂತೆ ವಿನಂತಿಸಿದರು. ನಂತರ ಕಾರ್ಯಾಚರಣೆ ಸ್ಥಗಿತಗೊಳಸಲಾಯಿತು.
ಜಹೀರಾಬಾದ ಬಡಾವಣೆಯಲ್ಲಿ ಅನಧಿಕೃತವಾಗಿ ಮಳಿಗೆಗಳನ್ನು ನಿರ್ಮಿಸಿಕೊಂಡಿದ್ದರಿಂದ ಮಳೆ ನೀರು ಮಾವಿನಕೆರೆ ಸೇರಲು ಸಾಧ್ಯವಾಗದೇ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆಗಳಿಂದಾಗಿತೆರವುಗೊಳಿಸುವಂತೆ ಅನೇಕ ಸಂಘಟನೆಗಳು ನಗರಸಭೆಗೆ ನೀಡಿದ್ದ ದೂರಿನ ಮೇರೆಗೆ ನಗರಸಭೆ ಪೌರಾಯುಕ್ತರು ಪರಿಶೀಲಿಸಿ ಮಳಿಗೆಗಳ ಮಾಲೀಕರ ಬೇಡಿಕೆ ಪುಸ್ತಕದಲ್ಲಿ ನೊಂದಣಿ ಮಾಡದೇ ಇರುವ ಕುರಿತು ಕಿರಿಯ ಅಭಿಯಂತರರಿAದ ವರದಪಡೆದು ತೆರವಿಗೆ ಆದೇಶ ನೀಡಿದ್ದರು. ಕಟ್ಟಡ ಪರವಾನಿಗೆ ಪಡೆಯದೇ ಅನಧಿಕೃತವಾಗಿ ನಿರ್ಮಿಸಲಾಗಿರುವ ಮಳಿಗೆಗಳು ಯಾರ ಪ್ರಭಾವದಿಂದ ನಿರ್ಮಿಸಲಾಗಿದೆ ಎಂಬುದು ನಿಗೂಢವಾಗಿ ಉಳಿದಿದೆ.
ಮಹ್ಮದವಾಲಿ, ಆಶಾರಖಾನ ಮಳಿಗೆ, ಭರತ, ಮಧೂಸೂಧನ, ವಿರೇಶ ,ಗಟ್ಟು ಮಾರೆಪ್ಪ ಹೆಸರಿನಲ್ಲಿ ಮಳಿಗೆ ನಿರ್ಮಾಣವಾಗಿದ್ದವು. ೧೧ ಮಳಿಗೆ ನಿರ್ಮಾಣವಾಗುತ್ತಿದ್ದು ಉಳಿದವರು ಯಾರವು ಎಂಬುದು ತಿಳಿದುಬಂದಿಲ್ಲ. ನಗರಸಭೆ ಅಧಿಕಾರಿಗಳು ಆರು ಜನರನ್ನು ಮಾತ್ರ ಪತ್ತೆ ಮಾಡಿದ್ದಾರೆ.
ನಗರಸಭೆಯಿಂದ ಯಾವುದೇ ಪರವಾನಿಗೆ ಪಡೆಯದೇ ಇದ್ದರೂ ಮಳಿಗೆಗಳನ್ನು ನಿರ್ಮಿಸಲಾಗಿರುವ ಕುರಿತು ನಗರಸಭೆ ಕ್ರಮಕ್ಕೆ ಮುಂದಾಗಿತ್ತು. ಅರ್ಧಕ್ಕೆ ತೆರವು ನಿಲ್ಲಲು ನಿರ್ದಿಷ್ಟ ಕಾರಣ ತಿಳಿದು ಬಂದಿಲ್ಲ. ರಾಜಕೀಯ ಪ್ರಭಾವ ಬಳಸಿಕೊಂಡೇ ಮಾವಿನಕೆರೆ ಸುತ್ತಮುತ್ತ ಕೆಲವರು ನಿವೇಶನ, ಮನೆ,ಮಳಿಗೆಗಳನ್ನು ನಿರ್ಮಿಸಿಕೊಂಡಿದ್ದಾರೆ ಎಂದು ದೂರುಗಳಿವೆ.
ಸಾರ್ವಜನಿಕರು ಅರ್ಧಕ್ಕೆ ತೆರವು ಕಾರ್ಯಚರಣೆ ಸ್ಥಗಿತಗೊಳಿಸಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.