ರಾಯಚೂರು: ಜಿಲ್ಲೆಯಲ್ಲಿ ಭತ್ತ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ ಗರಿಷ್ಠ 2450ರೂ.ಗಳ ಮೀರದಂತೆ ಬಾಡಿಗೆ ನಿಗದಿಪಡಿಸಲಾಗಿದ್ದು, ಹೆಚ್ಚಿನ ದರ ಪಡೆದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ತಿಳಿಸಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ 1,85,378 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿದೆ. ಈಗಾಗಲೇ ಹಲವೆಡೆ ಕಟಾವು ಪ್ರಾರಂಭವಾಗಿದೆ. ಶೇ95ರಷ್ಟು ರೈತರು ಭತ್ತದ ಬೆಳೆಯನ್ನು ಯಂತ್ರಗಳ ಮೂಲಕ ಕಟಾವು ಮಾಡುತ್ತಿದ್ದಾರೆ. ಭತ್ತದ ಬೆಳೆಯನ್ನು ಭತ್ತ ಕಟಾವು ಯಂತ್ರಗಳ ಮೂಲಕ ಕಟಾವು ಮಾಡುತ್ತಿದ್ದು, ಎಲ್ಲಾ ತಾಲ್ಲೂಕುಗಳಲ್ಲಿ ಖಾಸಗಿ ಭತ್ತ ಕಟಾವು ಯಂತ್ರಗಳ ಮಾಲೀಕರು ರೈತರಿಂದ ಪ್ರತಿ ಗಂಟೆಗೆ 2,500/-ರೂ.ರಿಂದ 3,000/-ರೂ.ಗಳವರೆಗೆ ಬಾಡಿಗೆ ಹಣ ವಸೂಲಿ ಮಾಡುತ್ತಿರುವ ಬಗ್ಗೆ ರೈತರುಗಳಿಂದ ಹಾಗೂ ಜನಪ್ರತಿನಿಧಿಗಳಿಂದ ದೂರು ಬಂದಿರುತ್ತದೆ.
ಪ್ರಸಕ್ತ ಸಾಲಿನಲ್ಲಿ ಬೆಳೆದ ಭತ್ತಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇಲ್ಲದ ಕಾರಣ ಹಾಗೂ ಅಕಾಲಿಕ ಮಳೆಯಿಂದ ರೈತರು ಸಂಕಷ್ಟದಲ್ಲಿರುವ ಕಾರಣ ಜಿಲ್ಲೆಯ ಭತ್ತ ಕಟಾವು ಯಂತ್ರದ ಮಾಲೀಕರು ಈ ದರಕ್ಕೆ ಮೀರದಂತೆ ಭತ್ತ ಕಟಾವು ಕೈಗೊಳ್ಳಲು ಸೂಚಿಸಲಾಗಿದೆ. ತಪ್ಪಿದ್ದಲ್ಲಿ ಭತ್ತ ಕಟಾವು ಯಂತ್ರದ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.