Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Politics NewsState News

ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ: ವಿದ್ಯೆ ಯಾರೋಬ್ಬರ ಸ್ವತ್ತಲ್ಲ- ಸಿದ್ದರಾಮಯ್ಯ

ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ: ವಿದ್ಯೆ ಯಾರೋಬ್ಬರ  ಸ್ವತ್ತಲ್ಲ- ಸಿದ್ದರಾಮಯ್ಯ

ಹೆಚ್.ಡಿ.ಕೋಟೆ ನ 12: ವಿದ್ಯೆ ಯಾರೊಬ್ಬರ ಸ್ವತ್ತೂ ಅಲ್ಲ. ವಾಲ್ಮೀಕಿ, ವ್ಯಾಸ, ಕನಕದಾಸ ಎಲ್ಲರೂ ಶೂದ್ರ, ದಲಿತ ಸಮುದಾಯದವರು. ಮೇಲ್ವರ್ಗಕ್ಕೆ ಮಾತ್ರ ಶಿಕ್ಷಣ ಎನ್ನುವುದು ತಪ್ಪು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಮೈಸೂರು ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಿದ್ದ ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದಲ್ಲಿನ 443.64 ಕೋಟಿಯ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ, ಫಲಾನುಭವಿಗಳಿಗೆ ಕೃಷಿ ಸಲಕರಣೆಗಳನ್ನು ವಿತರಿಸಿದ ಬಳಿಕ ವಾಲ್ಮೀಕಿ ಜಯಂತಿ ಪ್ರಯುಕ್ತ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ನಾವು ಈಗಾಗಲೇ ಸರ್ಕಾರದ ವತಿಯಿಂದ ವಾಲ್ಮೀಕಿ ಜಯಂತಿ ಆಚರಿಸುತ್ತಿದ್ದು ರಾಜ್ಯ ಮಟ್ಟದ ವಾಲ್ಮೀಕಿ ಪ್ರಶಸ್ತಿಯನ್ನೂ ನೀಡುತ್ತಿದ್ದೇವೆ. ವಾಲ್ಮೀಕಿಯವರು ಸಂಸ್ಕೃತದಲ್ಲಿ 20 ಸಾವಿರ ಶ್ಲೋಕಗಳನ್ನು ರಚಿಸಿದ್ದಾರೆ. ಶೂದ್ರ ವರ್ಗದ ಜನ ವಿದ್ಯೆ ಕಲಿಯುವುದೇ ನಿಷಿದ್ಧವಾಗಿದ್ದ ಕಾಲದಲ್ಲಿ ವಿದ್ಯೆ ಕಲಿತು, ಸಂಸ್ಕೃತವನ್ನೂ ಕಲಿತು ರಾಮಾಯಣ ರಚಿಸಿದ್ದು ಬಹಳ ದೊಡ್ಡ ಹೋರಾಟ ಮತ್ತು ಸಾಧನೆ ಎಂದರು.

ಮಹಾಭಾರತ ಬರೆದ ವ್ಯಾಸರು ಬೆಸ್ತರು, ರಾಮಾಯಣ ಬರೆದ ವಾಲ್ಮೀಕಿ ಬೇಡ ಸಮುದಾಯದವರು, ಶಾಕುಂತಲ ಬರೆದ ಕಾಳಿದಾಸರು ಕುರುಬ ಸಮುದಾಯದವರು. ವಿದ್ಯೆ ಯಾರೊಬ್ಬರ ಸ್ವತ್ತೂ ಅಲ್ಲ. ಅವಕಾಶಗಳು ಸಿಗಬೇಕು ಅಷ್ಟೆ. ನಮ್ಮ ಜೀವನವನ್ನು ರೂಪಿಸಿಕೊಳ್ಖುವ ಶಿಲ್ಪಿ ನಾವೇ. ಆದ್ದರಿಂದ ವಿದ್ಯೆ ಕಲಿಯಲೇಬೇಕು. ಶೂದ್ರ ಜಾತಿಯ ಕನಕದಾಸರು ದಾಸಶ್ರೇಷ್ಠರಾದರು. ಆದ್ದರಿಂದ ವಿದ್ಯಾವಂತರಾಗಲು ಜಾತಿ ಅಡ್ಡಿ ಬರುವುದಿಲ್ಲ. ಮೇಲ್ವರ್ಗದವರಿಗೆ ಮಾತ್ರ ವಿದ್ಯೆ ಎನ್ನುವುದನ್ನು ನಮ್ಮಲ್ಲಿ ಬಿತ್ತಿದ್ದಾರೆ. ಇದು ತಪ್ಪು ಎಂದರು.

ನಮ್ಮಪ್ಪ ಚನ್ನಪ್ಪಯ್ಯ ಅನ್ನುವವರ ಮೇಲ್ವರ್ಗದವರ ಮಾತು ಕೇಳಿ, ಕುರುಬರೆಲ್ಲಾ ಲಾಯರ್ ಓದೋಕೆ ಆಗಲ್ಲ ಎನ್ನುತ್ತಿದ್ದರು. ಆದರೆ ನಾನು ಹಠ ತೊಟ್ಟು ಕಾನೂನು ಓದಿ ಲಾಯರ್ ಆದೆ. ಮುಖ್ಯಮಂತ್ರಿಯೂ ಆದೆ ಎಂದರು.

ಇಂದು ನಾವು ಆಚರಿಸುತ್ತಿರುವ ಪ್ರಜಾಪ್ರಭುತ್ವಕ್ಕೆ ವಾಲ್ಮೀಕಿ ಅವರು ಅವತ್ತೇ ಅಡಿಪಾಯ ಹಾಕಿದ್ದರು. ಮಹಾತ್ಮಗಾಂಧಿಯವರು ಹೇಳುವ ರಾಮರಜ್ಯವನ್ನು ವಾಲ್ಮೀಕಿ ಅವರು ರಾಮಾಯಣದಲ್ಲೇ ಚಿತ್ರಿಸಿದ್ದಾರೆ. ಆದರೂ ವಾಲ್ಮೀಕಿ ಅವರು ದರೋಡೆಕೋರ ಆಗಿದ್ದರು ಎಂದೆಲ್ಲಾ ಸುಳ್ಖು ಕತೆ ಸೃಷ್ಟಿಸಿದ್ದಾರೆ. ಇವೆಲ್ಲಾ ನಂಬೋಕೆ ಹೋಗಬೇಡಿ ಎಂದರು. ವಾಲ್ಮೀಕಿ ಮಹಾನ್ ಮೇದಾವಿ, ವಿದ್ಯಾವಂತ ಆಗಿದ್ದ ಎಂದರು.

ಅಭಿವೃದ್ಧಿಗೆ ಹಣ ಇಲ್ಲ ಅಂದ್ರೆ 443 ಕೋಟಿ ಎಲ್ಲಿಂದ ಬಂತು: ಸಿ.ಎಂ.ಸಿದ್ದರಾಮಯ್ಯ ಪ್ರಶ್ನೆ*

ಇಂದು ಹೆಚ್.ಡಿ.ಕೋಟೆಯಲ್ಲಿ 443 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯ ಉದ್ಘಾಟಿಸಿದ್ದೇನೆ. ಶಂಕುಸ್ಥಾಪನೆಯನ್ನೂ ನೆರವೇರಿಸಿದ್ದಾರೆ. ರಾಜ್ಯ ಸರ್ಕಾರದ ಬಳಿ ಸಂಬಳ ಕೊಡಲು, ಅಭಿವೃದ್ಧಿಗೆ ಹಣ ಇಲ್ಲ ಬಿಜೆಪಿಯವರು ಹಸಿ ಸುಳ್ಳು ಹರಡಿಸುತ್ತಾರೆ. ನಮ್ಮಲ್ಲಿ ಹಣ ಇಲ್ಲದಿದ್ದರೆ ಈ 443 ಕೋಟಿ ಎಲ್ಲಿಂದ ಬಂತು? ಯಾವುದಾದರೂ ರಾಜ್ಯ ಸರ್ಕಾರಿ ನೌಕರರಿಗೆ ಸಂಬಳ ನಿಂತಿದೆಯಾ? ಎಂದು ಪ್ರಶ್ನಿಸಿದರು.

ರಾಜ್ಯದ ಕೋಟಿ ಕೋಟಿ ಫಲಾನುಭವಿಗಳು ನಮ್ಮ ಐದೂ ಗ್ಯಾರಂಟಿ ಯೋಜನೆಗಳ ಫಲವನ್ನು ಪ್ರತೀ ತಿಂಗಳೂ ಪಡೆಯುತ್ತಿದ್ದಾರೆ. ಆದರೂ ಬಿಜೆಪಿಯವರು ಗ್ಯಾರಂಟಿ ಯೋಜನೆಗಳಿಗೂ ಹಣ ಇಲ್ಲ ಎಂದು ಸುಳ್ಳು ಹರಡಿಸುತ್ತಿದ್ದಾರೆ. ಸುಳ್ಳೇ ಬಿಜೆಪಿಯ ಮನೆ ದೇವರು ಎಂದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಅನುದಾನವನ್ನು ಮೀಸಲಿಟ್ಟಿದ್ದು ನಮ್ಮ ಸರ್ಕಾರ. ಇದನ್ನು ಭಾರತದಲ್ಲಿ ಬೇರೆ ಯಾವ ಸರ್ಕಾರವೂ ಕೊಟ್ಟಿರಲಿಲ್ಲ ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಮೀಸಲಿಟ್ಟಿದ್ದ ಹಣದಲ್ಲಿ ಒಂದು ಪೈಸೆ ಕೂಡ ಕಡಿಮೆ ಆಗದಂತೆ ಕೊಡಲಾಗುವುದು. ಪರಿಶಿಷ್ಠ ವರ್ಗದ ಮಂತ್ರಿಯಾಗಿದ್ದ ನಾಗೇಂದ್ರ ಅವರ ಮೇಲೂ ಸುಳ್ಳು ಕೇಸು ಹಾಕಿದ್ದರು. ಈಗ ನಾಗೇಂದ್ರ ಅವರು ಜೈಲಿನಿಂದ ಹೊರಗೆ ಬಂದಿದ್ದಾರೆ. ಉಪ ಚುನಾವಣೆ ಮುಗಿದ ಬಳಿಕ ಈ ಬಗ್ಗೆ ಒಳ್ಳೆ ತೀರ್ಮಾನ ಮಾಡ್ತೀನಿ ಎಂದರು.

ನಮ್ಮ ಗ್ಯಾರಂಟಿಗಳಿಂದ ಅನುಕೂಲ ಪಡೆದವರು ನಮಗೆ ಮತ ಕೊಡಲಿ, ಬಿಡಲಿ ಆದರೆ ನಾವು ಬಡವರ ಕಲ್ಯಾಣಕ್ಕೆ ಕೆಲಸ ಮಾಡುವುದನ್ನು ಮಾತ್ರ ನಿಲ್ಲಿಸುವುದಿಲ್ಲ. ಬಡವರ ಪರ ಕೆಲಸ ಮಾಡುವುದು ನಮ್ಮ ಬದ್ಧತೆ ಎಂದರು.

ವಾಲ್ಮೀಕಿ ಸಂಘದ ಬೇಡಿಕೆಯಂತೆ ಹೆಚ್.ಡಿ.ಕೋಟೆಯಲ್ಲಿ ವಾಲ್ಮೀಕಿ ಭವನ ನಿರ್ಮಾಣಕ್ಕೆ 2 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಘೋಷಿಸಿದರು.

Megha News