Live Stream

June 2025
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ಉದ್ಯೋಗ ಮೇಳ ಯಶಸ್ವಿ, ಪ್ರಾದೇಶಿಕ ಮಟ್ಟದಲ್ಲೂ ಆಯೋಜನೆಗೆ ನಿರ್ಧಾರ: ಸಚಿವ ಶರಣ್ ಪ್ರಕಾಶ್ ಪಾಟೀಲ್

ಉದ್ಯೋಗ ಮೇಳ ಯಶಸ್ವಿ, ಪ್ರಾದೇಶಿಕ ಮಟ್ಟದಲ್ಲೂ ಆಯೋಜನೆಗೆ ನಿರ್ಧಾರ: ಸಚಿವ ಶರಣ್ ಪ್ರಕಾಶ್ ಪಾಟೀಲ್

ಬೆಂಗಳೂರು: ರಾಜಧಾನಿಯ ಅರಮನೆ ಮೈದಾನದಲ್ಲಿ ಕಳೆದ ಎರಡು ದಿನಗಳಿಂದ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಉದ್ಯೋಗ ಮೇಳದಲ್ಲಿ ನೋಂದಾಯಿಸಿದ್ದ 86,451 ಉದ್ಯೋಗಾಕಾಂಕ್ಷಿಗಳ ಪೈಕಿ 44,527 ಮಂದಿ ಹಾಜರಾಗಿದ್ದರು. ಅದರಲ್ಲಿ 9,654 ಮಂದಿಗೆ ಉದ್ಯೋಗ ದೊರೆತಿದ್ದು, 16,865 ಮಂದಿ ಮುಂದಿನ ಹಂತಕ್ಕೆ ತೇರ್ಗಡೆಯಾಗಿದ್ದಾರೆ ಎಂದು ಕೌಶಲ್ಯಾಭಿವೃದ್ಧಿ ಇಲಾಖೆ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಮಾಹಿತಿ ನೀಡಿದರು.

ಸಂದರ್ಶನಕ್ಕೆ ಹಾಜರಾದ 44,527 ಅಭ್ಯರ್ಥಿಗಳ ಪೈಕಿ 9,654 ಮಂದಿಗೆ ನೇಮಕಾತಿ ಪತ್ರ ನೀಡಲಾಗಿದೆ. 16,865 ಮಂದಿ ಶಾರ್ಟ್ ಲಿಸ್ಟ್​ನಲ್ಲಿದ್ದಾರೆ. 15,461 ಅಭ್ಯರ್ಥಿಗಳ ನೇಮಕಾತಿ ಪರಿಶೀಲನೆಯ ಹಂತದಲ್ಲಿದೆ. 2,547 ಅಭ್ಯರ್ಥಿಗಳನ್ನು ಕಂಪೆನಿಗಳು ತಿರಸ್ಕರಿಸಿವೆ ಎಂದು ತಿಳಿಸಿದರು.
ಉದ್ಯೋಗ ಮೇಳಕ್ಕೆ ಬೆಂಗಳೂರಿನಿಂದ 18,644, ಧಾರವಾಡ- 5,802, ಬಳ್ಳಾರಿ- 5,229, ಕಲಬುರಗಿ- 3,396, ಮೈಸೂರು- 3,199 ಸೇರಿದಂತೆ ವಿವಿಧ ಜಿಲ್ಲೆಗಳಿಂದ ಒಟ್ಟು 86,451 ಉದ್ಯೋಗಾಂಕ್ಷಿಗಳ ಹೆಸರು ನೋಂದಾಯಿಸಿಕೊಳ್ಳಲಾಗಿತ್ತು. ಇದರಲ್ಲಿ 44,527 ಮಂದಿ ಹಾಜರಾದರೆ, ಇನ್ನೂ ಕೆಲವರು ರಿಜಿಸ್ಟರ್ ಮಾಡಿಸಿಕೊಳ್ಳದೆ ನೇರವಾಗಿ ಬಂದು‌ ಸಂದರ್ಶನ ಎದುರಿಸಿದ್ದಾರೆ. ಒಟ್ಟಾರೆ‌ ಮೊದಲ ಬಾರಿಗೆ ಹಮ್ಮಿಕೊಂಡಿದ್ದ ಉದ್ಯೋಗ ಮೇಳ ಯಶಸ್ವಿಯಾಗಿದೆ ಎಂದು‌ ಹರ್ಷ ವ್ಯಕ್ತಪಡಿಸಿದರು.
ವಲಯವಾರು ಉದ್ಯೋಗ ಮೇಳ: ಇದೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ ಉದ್ಯೋಗ ಮೇಳಕ್ಕೆ ಉತ್ತಮ ಸ್ಪಂದನೆ ಸಿಕ್ಕಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡಲು ಪ್ರಾದೇಶಿಕ ಮಟ್ಟದಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಮೈಸೂರು, ಬೆಳಗಾವಿ, ಕಲಬುರಗಿ ಹಾಗೂ ಹುಬ್ಬಳ್ಳಿಯಲ್ಲಿ ಇದೇ ವರ್ಷ ಉದ್ಯೋಗಮೇಳ ನಡೆಸಲಾಗುವುದು‌. ವಲಯವಾರು ಮಟ್ಟದಲ್ಲಿ ಮೇಳ ನಡೆಸಿದರೆ ಸ್ಥಳೀಯರಿಗೆ ಅಧಿಕ ಸಂಖ್ಯೆಯಲ್ಲಿ ಉದ್ಯೋಗ ಸಿಗಲಿದೆ ಎಂದು ಈ ತೀರ್ಮಾನ ಕೈಗೊಳ್ಳಲಾಗಿದೆ‌ ಎಂದರು.
ಕಲಿಕೆ ಜೊತೆ‌ ಕೌಶಲ್ಯ ಕಾರ್ಯಕ್ರಮ: ಯುವ ಜನಾಂಗವನ್ನು ಉದ್ಯಮಶೀಲತೆಯಲ್ಲಿ ತೊಡಗಿಸಿಕೊಳ್ಳಲು ಕಲಿಕೆ ಜೊತೆ ಕೌಶಲ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ‌. ಪದವಿ ಅಥವಾ ಇನ್ನಿತರ‌ ಕೋರ್ಸ್ ಓದುವಾಗಲೇ ಔದ್ಯೋಗಿಕ ಕ್ಷೇತ್ರಗಳಲ್ಲಿ ಬೇಕಾದ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದೇ ಯೋಜನೆಯ ಉದ್ದೇಶ. ಈಗಾಗಲೇ 73 ಕಂಪೆನಿಗಳು ಮುಂದೆ ಬಂದಿವೆ. ಉದ್ಯೋಗಾಂಕ್ಷಿಗಳಿಗೆ ಆಯಾ ಉದ್ಯೋಗದ ಜೊತೆ ತರಬೇತಿ ನೀಡಲು ಇಂಡಸ್ಟ್ರಿಗಳ ಜೊತೆ ಮಾತುಕತೆ ನಡೆಸಲಾಗಿದೆ. ಕೌಶಲ್ಯ ಅಭಿವೃದ್ದಿ ನಿಗಮದ ಜಾಲತಾಣದಲ್ಲಿ ನೋಂದಾಯಿಸಲಾದ ಅಭ್ಯರ್ಥಿಗಳಿಗೆ ತರಬೇತಿ ನೀಡಿ, ಕೆಲಸ ನೀಡುವ ಹೊಣೆಗಾರಿಕೆಯನ್ನು ಕಂಪೆನಿಗಳು ವಹಿಸಿಕೊಂಡಿದ್ದು, ಈಗಾಗಲೇ ಸುಮಾರು 40 ಕಂಪೆನಿಗಳು ಮುಂದೆ ಬಂದಿವೆ. ತರಬೇತಿ ವೆಚ್ಚ ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದರು.
ಕೌಶಲ್ಯಾಭಿವೃದ್ಧಿ ಇಲಾಖೆಯು ಕೇರಳ ಮಾದರಿಯಲ್ಲಿ ಸಾಗರೋತ್ತರ ನೇಮಕಾತಿ ವಿಭಾಗ ತೆರೆದಿದೆ. ವಿದೇಶಗಳಲ್ಲಿ ಕೆಲಸ ಮಾಡುವ ಆಸಕ್ತರು ಸದ್ಬಳಕೆ ಮಾಡಿಕೊಳ್ಳಬಹುದು. ಮಾರಿಷಸ್, ಸ್ಲೊವಾಕಿಯಾ ಸೇರಿದಂತೆ ವಿವಿಧ ದೇಶಗಳ‌ ಕಂಪೆನಿಗಳು ಉದ್ಯೋಗ ನೀಡಲು ಮುಂದೆ ಬಂದಿದ್ದು, ಉದ್ಯೋಗಕ್ಕೆ ಅನುಗುಣವಾಗಿ ಅಭ್ಯರ್ಥಿಗಳಿಗೆ ತರಬೇತಿ ನೀಡಿ ವಿದೇಶಕ್ಕೆ ಕಳುಹಿಸಲಾಗುವುದು ಎಂದು ಸಚಿವರು ತಿಳಿಸಿದರು.

Megha News