ಬೆಂಗಳೂರು: ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿದ್ದು, ಬಿಜೆಪಿ ಪಕ್ಷವನ್ನು ಬಲಪಡಿಸಲು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕಿದೆ. ಬಿಜೆಪಿಯಲ್ಲಿ ಬಣಗಳಿರಬಹುದು ಆದರೆ ವಿಜಯೇಂದ್ರ ನಾಯಕತ್ವದಲ್ಲಿಯೇ ಪಕ್ಷ ನಡೆಯಲಿದೆ ಎಂದು ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ ಪಕ್ಷದ ವರಿಷ್ಠರಿಗೆ ಬಿಟ್ಟಿದ್ದು, ಹೈಕಮಾಂಡ್ ತೀರ್ಮಾನ ಅಂತಿಮ ತೀರ್ಮಾನವಾಗಿರುತ್ತದೆ. ಇದರ ಬಗ್ಗೆ ನಾವೇನು ಹೇಳುವುದಿಲ್ಲ. ಪಕ್ಷದ ನಾಯಕರು ಹೋರಾಟ, ಪಾದಯಾತ್ರೆ ಮಾಡುವುದಾದರೆ, ಸರ್ಕಾರದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಮನೆಯಿಂದ ಆರಂಭಿಸಬೇಕು ಆದರೆ ಪ್ರಸ್ತುತ ರಾಜ್ಯದಲ್ಲಿ ಬಿಜೆಪಿಯ ಕೆಲ ನಾಯಕರು ಹಿರಿಯರಾದ ಬಿಎಸ್ ಯಡಿಯೂರಪ್ಪ ಅವರ ಮನೆಯಿಂದ ಪಾದಯಾತ್ರೆ ಆರಂಬಿಸುತ್ತೇವೆ ಎಂದು ಹೇಳುತ್ತಿರುವುದು ಖಂಡನೀಯ ಇಂತಹ ನಡೆಗಳಿಗೆ ಕಡಿವಾಣ ಹಾಕಬೇಕಿದೆ ಎಂದರು.
ರಾಜ್ಯಾಧ್ಯಕ್ಷ ಬದಲಾವಣೆಗೆ ಚುನಾವಣೆ ನಡೆಯುತ್ತದೆ ಎಂಬ ಮಾತನ್ನು ಪಕ್ಷದ ಉಸ್ತುವಾರಿ ಹೇಳಿದ್ದಾರೆ. ಅದರಂತೆ ಮತ ಯಾರಿಗೆ ಹೆಚ್ಚು ಬರುತ್ತದೆಯೋ ಅವರೇ ರಾಜ್ಯಾಧ್ಯಕ್ಷರಾಗುತ್ತಾರೆ ಇದರಲ್ಲಿ ನಮ್ಮ ಅಭಿಪ್ರಾಯ ಮುಖ್ಯವಾಗುವುದಿಲ್ಲ ಎಂದು ಹೇಳಿದರು.