ರಾಯಚೂರು. ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರು ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ ಆರ್.ಪಾಟೀಲ ಅವರು ಲಿಂಗಸೂರು, ಮಸ್ಕಿ ಮತ್ತು ಸಿಂಧನೂರ ತಾಲೂಕುಗಳಲ್ಲಿ ಸಂಚರಿಸಿ ವಿವಿಧ ವಿಧಾನಸಭಾ ಕ್ಷೇತ್ರಗಳ ಬರಪೀಡಿತ ಪ್ರದೇಶಕ್ಕೆ ಖುದ್ದು ಭೇಟಿ ನೀಡಿ ಬೆಳೆ ಹಾನಿಯ ವೀಕ್ಷಣೆ ನಡೆಸಿದರು.
ಸಚಿವರು, ಪೂರ್ವ ನಿಗದಿಯಂತೆ ಬೆಳಗ್ಗೆ ಕಲಬುರಗಿಯಿಂದ ಹೊರಟು 10 ಗಂಟೆಗೆ ಲಿಂಗಸೂರ ಪಟ್ಟಣಕ್ಕೆ ಆಗಮಿಸಿದರು. ಬಳಿಕ ಅಲ್ಲಿನ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶಾಸಕರಾದ ಮಾನಪ್ಪ ಡಿ.ವಜ್ಜಲ್, ವಿಧಾನ ಪರಿಷತ್ ಶಾಸಕರಾದ ಶರಣಗೌಡ ಪಾಟೀಲ ಬಯ್ಯಾಪುರ ಅವರು ಹಾಗೂ ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬರ ನಿವರ್ಹಣೆ, ಕುಡಿಯುವ ನೀರು, ಬೆಳೆ ಹಾನಿ, ಜಾನುವಾರುಗಳಿಗೆ ಮೇವು ಸಂಗ್ರಹ ಸೇರಿದಂತೆ ನಾನಾ ವಿಷಯಗಳನ್ನು ಬಗ್ಗೆ ಸಮಗ್ರ ಚರ್ಚಿಸಿ ಮಾಹಿತಿ ಪಡೆದರು.
ಜಿಲ್ಲೆಯಲ್ಲಿ ಇದುವರಗೆ ಸುರಿದ ಮಳೆಯ ವಿವರ, ಬಿತ್ತನೆ ಮಾಹಿತಿ, ಮೇವಿನ ಸಂಗ್ರಹದ ಬಗ್ಗೆ ಇದೆ ವೇಳೆ ಜಿಲ್ಲಾಧಿಕಾರಿಗಳಾದ ಚಂದ್ರಶೇಖರ ನಾಯಕ ಎಲ್ ಅವರು ಸಚಿವರಿಗೆ ಮಾಹಿತಿ ನೀಡಿದರು.
ಈ ವೇಳೆ ಮಾತನಾಡಿದ ಸಚಿವರು, ಮುಂದಿನ ದಿನಗಳಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆಯಾ ಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕುಡಿಯುವ ನೀರು ಪೂರೈಕೆಗೆ ಸಂಬಂಧಿಸಿದ ಯಾವುದೇ ರೀತಿಯ ಕಾಮಗಾರಿಗಳು ವಿಳಂಬವಾಗದಂತೆ ನಡೆಯಬೇಕು ಎಂದು ಸಂಬಂಧಿಸಿದ ಅಧಿಕಾರಿ ಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಪಾಂಡ್ವೆ, ಲಿಂಗಸಗೂರು ತಹಸೀಲ್ದಾರರು, ಪುರಸಭೆ ಮುಖ್ಯಾಧಿಕಾರಿಗಳು, ಕಂದಾಯ ನಿರೀಕ್ಷಕರು, ನಾಡ ತಹಸೀಲದಾರರು, ಗ್ರಾಮ ಆಡಳಿತ ಅಧಿಕಾರಿಗಳು ಇದ್ದರು.