Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

National News

ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಮಾಡಲು ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಭೇಟಿ ಮಾಡಿದ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಮನವಿ

ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಮಾಡಲು ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಭೇಟಿ ಮಾಡಿದ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಮನವಿ

ನವದೆಹಲಿ. ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದ ಪ್ರಮುಖ ಜಿಲ್ಲೆಯಾದ ರಾಯಚೂರಿನಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್) ಸ್ಥಾಪಿಸಬೇಕೆಂಬ ತನ್ನ ಬೇಡಿಕೆಯನ್ನು ರಾಜ್ಯ ಸರ್ಕಾರ ಮತ್ತೊಮ್ಮೆಕೇಂದ್ರ ಸರ್ಕಾರದ ಮುಂದೆ ಪುನರುಚ್ಚರಿಸಿದೆ.

ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಅವರು ಶುಕ್ರವಾರ ನವದೆಹಲಿಯಲ್ಲಿ ಕೇಂದ್ರ ಆರೋಗ್ಯಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ, ರಾಯಚೂರಿಗೆ ಶೀಘ್ರವೇ ಏಮ್ಸ್ ಮಂಜೂರು ಮಾಡುವಂತೆ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಸಚಿವ ಪಾಟೀಲ್ ಅವರು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 15% NRI ಕೋಟಾವನ್ನು ಮಂಜೂರು ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದರು.
ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಸ್ಥಾಪಿನೆ ಮತ್ತು ಎನ್‌ಆರ್‌ಐ ಕೋಟಾವನ್ನು ಮಂಜೂರು ಮಾಡಲು ಕೋರಿ ಆರು ತಿಂಗಳ ಅವಧಿಯಲ್ಲಿ ಡಾ.ಪಾಟೀಲ್ ಅವರು ನವದೆಹಲಿಯ ಭೇಟಿ ಇದು ಎರಡನೇದ್ದಾಗಿದೆ.
ನಡ್ಡಾ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಸಚಿವರು, ರಾಯಚೂರಿನಲ್ಲಿ ಏಮ್ಸ್‌ ಅಸ್ಪತ್ರೆ ಸ್ಥಾಪನೆ ಮಾಡಬೇಕು ಎಂಬುದು ಹಲವಾರು ವರ್ಷಗಳ ಬೇಡಿಕೆಯಾಗಿದೆ. ದೇಶದಲ್ಲಿ ಕರ್ನಾಟಕ ಸೇರಿದಂತೆ ಒಂದೆರಡು ರಾಜ್ಯಗಳಿಗೆ ಮಾತ್ರ ಮಂಜೂರು ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಏಮ್ಸ್ ಸ್ಥಾಪನೆಯಿಂದ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಆಗಲಿರುವ ಅಭಿವೃದ್ಧಿಯ ಬಗ್ಗೆ ಕೇಂದ್ರ ಆರೋಗ್ಯ ಸಚಿವರಿಗೆ ಮನವರಿಕೆ ಮಾಡಲಾಗಿದೆ. ಪ್ರಸಕ್ತ ಸಂಸತ್ತಿನ ಅಧಿವೇಶನ ಮುಗಿಯುವ ಮೊದಲು ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಯನ್ನು ಕೇಂದ್ರವು ಘೋಷಿಸಬಹುದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ವೈದ್ಯಕೀಯ ಕಾಲೇಜುಗಳಲ್ಲಿ 15% NRI ಕೋಟಾ
ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಆರ್‌ಐ ಕೋಟಾವನ್ನು ಪ್ರಾರಂಭಿಸಬೇಕು ಎಂದು ಮತ್ತೊಂದು ಪ್ರಸ್ತಾವನೆ ಸಲ್ಲಿಸಿದ ಸಚಿವ ಶರಣ್ ಪ್ರಕಾಶ್ ಪಾಟೀಲ್, 2025-26ನೇ ಶೈಕ್ಷಣಿಕ ವರ್ಷದಿಂದ ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರಿ ಸ್ವಾಯತ್ತ ವೈದ್ಯಕೀಯ ಕಾಲೇಜುಗಳಲ್ಲಿ ಸೂಪರ್‌ನ್ಯೂಮರರಿ ಎಂಬಿಬಿಎಸ್ ಸೀಟುಗಳನ್ನು ಮಂಜೂರು ಮಾಡುವಂತೆ ನಡ್ಡಾ ಅವರಿಗೆ ಮನವಿ ಮಾಡಿದರು. ರಾಜ್ಯದ 22 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಕ್ಕಾಗಿ 508 ಹೆಚ್ಚುವರಿ ಸೂಪರ್‌ನ್ಯೂಮರರಿ ಎಂಬಿಬಿಎಸ್ ಸೀಟುಗಳನ್ನು ಸೃಷ್ಟಿಸುವ ಮೂಲಕ 15% ಎನ್‌ಆರ್‌ಐ ಕೋಟಾವನ್ನು ಮಂಜೂರು ಮಾಡುವಂತೆ ನಡ್ಡಾ ಅವರ ಗಮನಕ್ಕೆ ತಂದಿದ್ದಾರೆ. ಡಾ.ಪಾಟೀಲ್ ಅವರು ಕಳೆದ ತಿಂಗಳು ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್ ಎಂಸಿ) ಅಧ್ಯಕ್ಷರನ್ನು ಭೇಟಿ ಮಾಡಿ ಈ ಸಂಬಂಧ ಪತ್ರ ಸಲ್ಲಿಸಿದ್ದರು.
ಸೂಪರ್‌ನ್ಯೂಮರರಿ ಎಂಬಿಬಿಎಸ್ ಸೀಟುಗಳ ಪ್ರಸ್ತಾವನೆಯನ್ನು ಸಮರ್ಥಿಸಿದ ಸಚಿವರು, ಲಭ್ಯವಿರುವ ವಾರ್ಷಿಕ ಸೀಟುಗಳ ಒಳಗೆ ಎನ್‌ಆರ್‌ಐ ಕೋಟಾವನ್ನು ರಚಿಸುವುದು ಕಾರ್ಯಸಾಧ್ಯವಲ್ಲ ಮತ್ತು ಅಸ್ತಿತ್ವದಲ್ಲಿರುವ ಪ್ರವೇಶಕ್ಕೆ ಅಡ್ಡಿಪಡಿಸುವುದು ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಪ್ರತಿಭಟನೆ ವ್ಯಕ್ತವಾಗಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ್ದರು.
ವೈದ್ಯಕೀಯ ಶಿಕ್ಷಣ ಇಲಾಖೆಯ ಅಡಿಯಲ್ಲಿ 22 ಸರ್ಕಾರಿ ವೈದ್ಯಕೀಯ ಕಾಲೇಜುಗಳು 2023-24 ನೇ ಸಾಲಿನಲ್ಲಿ 3,450 ಸೀಟುಗಳ ಸಾಮರ್ಥ್ಯವನ್ನು ಹೊಂದಿದ್ದು ಅದರಲ್ಲಿ 85% (2929 ಸೀಟುಗಳು) ಕರ್ನಾಟಕ ಕೋಟಾ ಮತ್ತು 521 ಅಂದರೆ 15% ಅಖಿಲ ಭಾರತ ಕೋಟಾ ಆಗಿದೆ.

Megha News